ಹಾಲಿನ ದರ ಏರಿಕೆ; ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್
ಹಾಲಿನ ದರ ಏರಿಕೆ; ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಸೆ.26:
“ಹಾಲಿನ ದರ ಹೆಚ್ಚಳದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಫ್ರೀಡಂ ಪಾರ್ಕ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಹಾಲಿನ ದರ ಏರಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ನನ್ನನ್ನು ಭೇಟಿಯಾಗಿ 12ರೂ. ಹೆಚ್ಚಳ ಮಾಡಿ. ಅದರಲ್ಲಿ 2 ರೂ. ಸಂಘಗಳಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿಗಳನ್ನು ಪಡೆದು, ಪರಿಶೀಲಿಸಿದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ' ಎಂದು ಹೇಳಿದರು.
'ಹಾಲಿನ ಪ್ರಸ್ತುತ ದರದಿಂದ ಸಂಘಗಳಿಗೆ ನಷ್ಟವಾಗುತ್ತಿದೆ. ಬೆಲೆ ವಿಚಾರದಲ್ಲಿ ರೈತರಲ್ಲಿ ಆಕ್ರೋಶವಿದೆ. 50 ಸಾವಿರ ಹಾಲು ಉತ್ಪಾದಕರು ಹಾಲಿನ ದರ ಏರಿಕೆಗೆ ಆಗ್ರಹಿಸಿದ್ದಾರೆ. ರೈತರನ್ನು ಹಾಗೂ ಒಕ್ಕೂಟಗಳನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ' ಎಂದರು.
0000
ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ ಆಶಯ: ಸಿಎಂ ಡಿ ಕೆ ಶಿವಕುಮಾರ್
ನಮ್ಮ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ
ಅಲ್ಪಸಂಖ್ಯಾತರು ಎಸ್ಐಆರ್ ಬಗ್ಗೆ ಎಚ್ಚರದಿಂದಿರಿ
ಮಹಿಳೆಯರು ಸ್ವಾವಲಂಬಿಗಳಾಗಿ, ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸಿ
ಬೆಂಗಳೂರು, ಸೆ.26:
“ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ ಆಶಯ. ಇದು ನಮ್ಮ ಸರ್ಕಾರದ ಪ್ರತಿಬಿಂಬ, ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ, ಕುಶಲಕರ್ಮಿಗಳ ಬದುಕು ಬೆಳಗಲಿ ಎಂದು ಈ ಕಾರ್ಯಕ್ರಮ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಕರ್ನಾಟಕ ಪರ್ವ 2026 ಕಾರ್ಯಕ್ರಮವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ನಾವು ಈ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದೆ, ನಮ್ಮ ಮಿತ್ರ ಯು ಟಿ ಖಾದರ್ ಅವರು ಉತ್ತಮ ಆರಂಭ ನೀಡಿದರು. ಎಲ್ಲಾ ಧರ್ಮದ ಪ್ರಮುಖರನ್ನು ಈ ಕಾರ್ಯಕ್ರಮದಲ್ಲಿ ನೋಡುತ್ತಿದ್ದೇವೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲಿ, ಪೈಗಂಬರ್ ಅವರು ದಿವ್ಯ ವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆಯಲ್ಲಿ, ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಗಳಿಗೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಖಾದರ್ ಅವರು ಆರಂಭಿಸಿದ್ದಾರೆ” ಎಂದು ಬಣ್ಣಿಸಿದರು.
“ಇಂದು 180ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಲಾಗಿದೆ. ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಕರ್ನಾಟಕ ಸಾಂಸ್ಕೃತಿಕ ವೈವಿದ್ಯತೆ ವೇದಿಕೆಯಾಗಿದೆ. ಕುಶಲಕರ್ಮಿಗಳ ಕೈಚಳಕ ಮಾರುಕಟ್ಟೆ, ಉದ್ಯಮಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸುತ್ತಿದ್ದೇವೆ. ಪಾರಂಪರಿಕ ಕಲೆ ಉಳಿಸಲು ಪ್ರೋತ್ಸಾಹ ನೀಡಲು ನಾವು ಸೇರಿದ್ದೇವೆ. ನಮ್ಮ ರಾಜ್ಯದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಹಾರ ಪದ್ಧತಿ ಇದೆ. ಈ ವೈವಿದ್ಯತೆ ನಮ್ಮ ದೇಶದ ಶಕ್ತಿ. ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಇದನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮ್ಮ ಸರ್ಕಾರ, ಜನತೆಯ ಸರ್ಕಾರ” ಎಂದು ತಿಳಿಸಿದರು.
“ಅಲ್ಪಸಂಖ್ಯಾತರ ಸ್ವಾವಲಂಬಿಕರಣ, ಕರ್ನಾಟಕದ ಸಮಗ್ರ ಅಭಿವೃದ್ಧಿಯ ಭಾಗ. ಅಲ್ಪಸಂಖ್ಯಾತರ ಎಲ್ಲಾ ಸಮುದಾಯಗಳು ಒಟ್ಟಾಗಿ ಸೇರಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಇತಿಹಾಸ. ಇದೇ ಉದೇಶದ ಮೇಲೆ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ನಾಡಿನ ಎಲ್ಲಾ ಜನರ ಬದುಕಿಗೆ ಕೊಟ್ಟ ದೊಡ್ಡ ಅವಕಾಶ ಕರ್ನಾಟಕ ಪರ್ವ. ನಾನು ಅಧಿಕಾರ ವಹಿಸಿಕೊಂಡು 115 ದಿನಗಳಾಗಿವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಲಾಗಿದ್ದು, ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ” ಎಂದರು.
ನಮ್ಮ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ
“ಇಂದು ಅಲ್ಪಸಂಖ್ಯಾತ ಸಮುದಾಯದ ಮೂವರನ್ನು ಸಚಿವರನ್ನಾಗಿ, ಒಬ್ಬರನ್ನು ಪರಿಷತ್ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. 25 ಕ್ಕೂ ಹೆಚ್ಚು ಮಂದಿಗೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದೆ. ಕಲಬುರ್ಗಿ ದರ್ಗಾದ ಪ್ರಮುಖ ನಾಯಕರಿಗೆ ವಕ್ಫ್ ಮಂಡಳಿ ಜವಾಬ್ದಾರಿ ನೀಡಲಾಗಿದೆ. ಆಮೂಲಕ ರಾಜ್ಯದ ಬೇರೆ ಭಾಗದ ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಎಸ್ಐಆರ್ ಬಗ್ಗೆ ಎಚ್ಚರದಿಂದಿರಿ
“ಈ ಬಾರಿಯ ಮೈಸೂರು ದಸರಾ ಹಬ್ಬಕ್ಕೆ ಬೈಲುಕುಪ್ಪೆಯ ಬೌದ್ಧಧರ್ಮದವರಿಗೆ ಹಾಗೂ ರಾಜ್ಯದ ಎಲ್ಲಾ ಸಮುದಾಯದವರಿಗೆ ಆಹ್ವಾನ ನೀಡಿದ್ದೇನೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಅದರಲ್ಲೂ ಯುವಕರ ವಿದ್ಯಾಭ್ಯಾಸಕ್ಕೆ ಹಾಗೂ ಕೌಶಲ್ಯಕ್ಕೆ ಉತ್ತೇಜನ ನೀಡಲು ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ನೀವು ಬೇರೆ ಕಡೆ ಉದ್ಯೋಗ ಹುಡುವುದರ ಜತೆಗೆ ನೀವೇ ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸುವಂತಹ ಕಾರ್ಯಕ್ರಮ ರೂಪಿಸಿದ್ದೇವೆ" ಎಂದರು.
"ಯುವ ಜನಾಂಗ ಜಾಗೃತರಾಗಿರಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲು ಸಂಚು ನಡೆಯುತ್ತಿದ್ದು, ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದಿದ್ದೇವೆ. ನೀವು ನಿಮ್ಮ ಮತದಾನದ ಹಕ್ಕು ರಕ್ಷಿಸಿಕೊಳ್ಳಿ. ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ. ಇದನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡುವೆ” ಎಂದು ಕರೆ ನೀಡಿದರು.
0000
ಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಸಿಎಂ ಡಿ ಕೆ ಶಿವಕುಮಾರ್
ರಾಷ್ಟ್ರಪತಿಗಳೇ ಚುನಾವಣಾ ಆಯೋಗ ವಿಸರ್ಜಿಸಿ
ಎಸ್‌ಐಆರ್ ರದ್ದುಗೊಳಿಸಿ; ಹೊಸ ಪ್ರಕ್ರಿಯೆ ನಡೆಸಿ
ಮೋದಿಯವರ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ
ಗ್ರಾಮ ಮಟ್ಟಕ್ಕೆ ಎಸ್ ಐಆರ್ ವಿರೋಧಿ ಹೋರಾಟ
ಬೆಂಗಳೂರು, ಸೆ.26:
“ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಬಡ ಹಾಗೂ ಆಡಳಿತ ವ್ಯವಸ್ಥೆ ಟೀಕಿಸುವ ಮತದಾರರ ಹೆಸರನ್ನು ಗುರಿಯಾಗಿಸಲಾಗಿದೆ. ಬಿಜೆಪಿ ಜೊತೆ ಸೇರಿ ಮತಗಳ್ಳತನಕ್ಕೆ ಪಾಲುದಾರರಾಗಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ ಆಯುಕ್ತರನ್ನು ಬಂಧಿಸಬೇಕು ಹಾಗೂ ಅಕ್ರಮವಾಗಿ ನಡೆದ ಚುನಾವಣೆಗಳನ್ನು ರದ್ದು ಮಾಡಬೇಕು. ಸಂವಿಧಾನದ ಮೂಲಕ ಈ ದೇಶದ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ ಅಧಿಕಾರ ನೀಡಲಾಗಿತ್ತು. ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಾಕ್ಷಿಗಳೂ ಕಾಣುತ್ತಿವೆ” ಎಂದರು.
“ಜ್ಞಾನೇಶ್ ಕುಮಾರ್ ಅವರು ಚೀಫ್ ಎಲೆಕ್ಷನ್ ಕಮಿಷನರ್ ಅಲ್ಲ, ಚೀಫ್ ಸೆಲೆಕ್ಷನ್ ಕಮಿಷನರ್ ಆಗಿದ್ದೀರಿ. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು. ಅಧಿಕಾರದ ವ್ಯಾಮೋಹ ಜಾಸ್ತಿ ದಿನ ಇರುವುದಿಲ್ಲ. ಹುಟ್ಟಿದ ಸೂರ್ಯ ಮುಳುಗಲೇಬೇಕು. ಈಗ ನಡೆದಿರುವ ಎಸ್ ಐಆರ್ ರದ್ದುಗೊಳ್ಳಬೇಕು. ಹೊಸದಾಗಿ ಮರುಪರಿಶೀಲನೆ ನಡೆಯಬೇಕು” ಎಂದರು.
ಮೋದಿಯವರ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ
“ಪ್ರಧಾನಿ ಮೋದಿ ಅವರು ಕೈಗೊಂಬೆಯಂತಿರುವವರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡಿದರು. ಆದರೆ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ತೀರ್ಪಿನ ವಿರುದ್ಧ ಸಿಡಿದೆದ್ದಿದ್ದಾರೆ. ಇದು ನಿಮ್ಮ ತೀರ್ಪಿನ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ” ಎಂದು ಕುಹಕವಾಡಿದರು.
“ಕರ್ನಾಟಕದ ಜನಸಂಖ್ಯೆ 7 ಕೋಟಿ. ಇದರಲ್ಲಿ 5.54 ಕೋಟಿ ಮತದಾರರು ಇದ್ದಾರೆ. ಇದನ್ನು ಎಸ್ ಐಆರ್ ನಡೆಸಿ 4.46 ಕೋಟಿಗೆ ಇಳಿಕೆ ಮಾಡಲಾಗಿದೆ. 30-40 ಲಕ್ಷಕ್ಕೆ ನೋಟಿಸ್ ನೀಡಲಾಗಿದೆ. ಇದರ ತೀರ್ಮಾನವನ್ನು ನಾವು ಕಾಯುತ್ತೇವೆ. ಮತದಾನದ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ನಮ್ಮ ಸಂವಿಧಾನ ನೀಡಿದ ಅತಿದೊಡ್ಡ ಅವಕಾಶ ಮತದಾನ. ಇದು ಕಳೆದು ಹೋಗಲು ನಾವು ಬಿಡೆವು” ಎಂದರು.
“ಬೆಂಗಳೂರು ಕೇಂದ್ರ ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ಅವರು 31 ಸಾವಿರ ಮತಗಳ ಅಂತರದಿಂದ ಚುನಾವಣ ಆಯೋಗದ ಪ್ರಕಾರ ಸೋತಿದ್ದರು. ಈಗ ಎಸ್ ಐಆರ್ ನಿಂದ 12 ಲಕ್ಷ ಮತಗಳು ಕಡಿಮೆಯಾಗಿವೆ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿದ್ದಾರೆಯೇ?” ಎಂದರು.
“ಮಹದೇವಪುರದಲ್ಲಿ 3 ಲಕ್ಷ ಮತಗಳು ಕಾಣೆಯಾಗಿವೆ. ಈಗ 12 ಲಕ್ಷ ಮತಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಬಿಜೆಪಿಯ ದುಷ್ಕೃತ್ಯದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಹೋಗುತ್ತಿದೆ. ಆದ ಕಾರಣ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ. ಎಸ್ ಐಆರ್ ಸೇರಿದಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ” ಎಂದರು.
ಗ್ರಾಮ ಮಟ್ಟಕ್ಕೆ ಎಸ್ ಐಆರ್ ವಿರೋಧಿ ಹೋರಾಟ
“ನಾವು ಇದೇ ಮುಂಬರುವ ನವೆಂಬರ್, ಡಿಸೆಂಬರ್ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತೇವೆ. ಇದಕ್ಕೆ ಬ್ಯಾಲೆಟ್ ಪೇಪರ್ ಬಳಸುವ ತೀರ್ಮಾನ ಮಾಡಿದ್ದೇವೆ. ಬಲಿಷ್ಠ ಚುನಾವಣಾ ವ್ಯವಸ್ಥೆಗೆ ನಾವು ಹೋರಾಟ ಮಾಡುತ್ತಿದ್ದೇವೆ. ಪ್ರತಿ ಹಳ್ಳಿಗೂ ಎಸ್ ಐಆರ್ ವಿರೋಧಿ ಹೋರಾಟ ತಲುಪಿಸಲಾಗುವುದು” ಎಂದರು.
“ಕಾಂಗ್ರೆಸ್ ಪಕ್ಷ ಸಂವಿಧಾನದ ಮೂಲಕ ದೇಶದ ಪ್ರಜೆಗಳಿಗೆ ಅತಿದೊಡ್ಡ ಅವಕಾಶ ನೀಡಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಸೇರಿದಂತೆ ಅನೇಕ ಕೊಡುಗೆಗಳನ್ನು ನಾವು ಈ ದೇಶಕ್ಕೆ ನೀಡಿದ್ದೇವೆ. ಇಡೀ ಪ್ರಪಂಚ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನೋಡಿ ಅನುಕರಿಸಿದೆ. ಆದರೆ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದ ನಮ್ಮ ಇಡೀ ಮಾದರಿ ವ್ಯವಸ್ಥೆ ಮೇಲೆ ಅನೇಕ ರಾಷ್ಟ್ರಗಳು ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ” ಎಂದರು.
”ಮತಗಳ್ಳತನದ ವಿರುದ್ಧ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಇದೇ ನೆಲದಿಂದ ಹೋರಾಟ ಪ್ರಾರಂಭ ಮಾಡಿದ್ದರು. ಪ್ರತಿಯೊಬ್ಬ ಬಿಎಲ್ ಎ- 2 ಸೇರಿದಂತೆ ಪಕ್ಷದ ನಾಯಕರು ಹೋರಾಟ ರೂಪಿಸಬೇಕು” ಎಂದು ಹೇಳಿದರು.






Comments
Leave a Comment