ನ್ಯಾಯವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಪೊಲೀಸ್ ಅಕಾಡೆಮಿ ಸಿಬ್ಬಂದಿಗೆ ₹2 ಲಕ್ಷ ಬಹುಮಾನ ಘೋಷ
ಮೈಸೂರು, ಮಾರ್ಚ್ 29:
ನ್ಯಾಯವಿತರಣೆಯಲ್ಲಿ ಯಾವುದೇ ಕಾರಣಕ್ಕೂ ಪೊಲೀಸರು ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಅವರು ಮೈಸೂರಿನಲ್ಲಿ ನಡೆದ 46ನೇ ತಂಡದ ಸಿವಿಲ್ ಪೊಲೀಸ್ ಉಪನಿರೀಕ್ಷಕರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಸ್ತು, ಪ್ರಾಮಾಣಿಕತೆ, ಮಾನವೀಯತೆ ಮುಖ್ಯ
ಪೊಲೀಸ್ ಸೇವೆಯಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಅತ್ಯಂತ ಮುಖ್ಯವೆಂದು ಅವರು ತಿಳಿಸಿದರು. ಸಮಾಜದ ದೀನ ದಲಿತರ, ಅಶಕ್ತರು ಹಾಗೂ ಮಹಿಳೆಯರ ರಕ್ಷಣೆಯ ಜವಾಬ್ದಾರಿ ಪೊಲೀಸರ ಮೇಲಿದೆ. “ಮಹಿಳೆಯರು ಮಧ್ಯರಾತ್ರಿ ನಿರ್ಭಯವಾಗಿ ಸಂಚರಿಸುವಂತಾದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆತಂತೆ,” ಎಂದು ಮಹಾತ್ಮ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿದರು.
377 ಉಪನಿರೀಕ್ಷಕರ ಸೇರ್ಪಡೆ
ಈ ಸಂದರ್ಭದಲ್ಲಿ 377 ಸಬ್ ಇನ್ಸ್ಪೆಕ್ಟರ್‌ಗಳು ಸೇವೆಗೆ ಸೇರ್ಪಡೆಯಾಗುತ್ತಿರುವುದಾಗಿ ಅವರು ಘೋಷಿಸಿದರು. ಕಳೆದ ಮೂರು ವರ್ಷಗಳಲ್ಲಿ 4911 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಖಾಲಿ ಇರುವ 8000 ಹುದ್ದೆಗಳನ್ನೂ ಭರ್ತಿ ಮಾಡುವುದಾಗಿ ಭರವಸೆ ನೀಡಿದರು.
ಅಭಿವೃದ್ಧಿ ಕಾರ್ಯಗಳಲ್ಲಿ ಹಿಂಜರಿಕೆ ಇಲ್ಲ
ಸರ್ಕಾರ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದರು. “ಸತ್ಯ, ನಿಷ್ಠೆಯಿಂದ ಸೇವೆ ಸಲ್ಲಿಸಿ, ಕುಟುಂಬದ ಚಿಂತೆಯಿಲ್ಲದೆ ಕರ್ತವ್ಯ ನಿರ್ವಹಿಸಿ,” ಎಂದು ಸೂಚಿಸಿದರು.
ಮಾದಕವಸ್ತು ಮುಕ್ತ ಸಮಾಜ
ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಸರ್ಕಾರದ ಗುರಿ ಎಂದು ಅವರು ತಿಳಿಸಿದರು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಯುವಜನಾಂಗದ ಮೇಲೆ ಮಾದಕವಸ್ತುಗಳ ಪರಿಣಾಮ ಮಾರಕವಾಗಿರುವುದರಿಂದ ಇದನ್ನು ನಿರ್ಮೂಲನೆ ಮಾಡುವುದು ಅಗತ್ಯವೆಂದರು.
ಮಾನವೀಯತೆ ಮತ್ತು ಧೈರ್ಯ
ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಬೇಕು, ನಿರಪರಾಧಿಗಳಿಗೆ ಕರುಣೆ ತೋರಬೇಕು, ಆದರೆ ಅಪರಾಧಿಗಳಿಗೆ ಕಠಿಣವಾಗಿ ಎದುರಿಸಬೇಕು ಎಂದು ಹೇಳಿದರು. ಸಮಾಜದ ದುರ್ಬಲ ವರ್ಗವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಸೈಬರ್ ಅಪರಾಧಗಳನ್ನು ತಡೆಗಟ್ಟಲು ನೀಡಿದ ತರಬೇತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಉಲ್ಲೇಖ
“ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ” ಎಂದು ಅಂಬೇಡ್ಕರ್ ಹೇಳಿದ್ದನ್ನು ಉಲ್ಲೇಖಿಸಿ, ಶ್ರೀಮಂತರ ಹಣಬಲದ ದುರುಪಯೋಗಕ್ಕೆ ಒಳಗಾಗಬಾರದು, ಧೈರ್ಯದಿಂದ ಕೆಲಸ ಮಾಡಿ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಕಿವಿಮಾತು ಹೇಳಿದರು.




Comments
Leave a Comment