ಹೆಣ್ಣು ಧೈರ್ಯದಿಂದ ಇದ್ದರೆ ಮನೆಗೆ ಬೆಳಕಿದ್ದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Bengaluru Urban:

Font size:

* ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭರವಸೆ: ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು

ಬೆಂಗಳೂರು : ಹೆಣ್ಣು ಸ್ವಾಭಿಮಾನದ ಪ್ರತೀಕ, ಹೆಣ್ಣು ಧೈರ್ಯದಿಂದ ಇದ್ದರೆ ಇಡೀ ಮನೆಗೆ ಬೆಳಕಿದ್ದಂತೆ, ಮನೆಯಲ್ಲಿರುವ ಮಕ್ಕಳು, ಗಂಡ, ಅತ್ತೆ ಮಾವ ಎಲ್ಲರೂ ಧೈರ್ಯದಿಂದ ಇರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಹಿಳೆ ಮನೆಯಲ್ಲಿ ನಕ್ಕರೆ ಇಡೀ ಮನೆಯೇ ನಗುತ್ತಿರುತ್ತೆ, ಸ್ವಾಭಿಮಾನದಿಂದ ಇದ್ದರೆ ಮನೆಯಲ್ಲಿರುವ ಎಲ್ಲರೂ ಸ್ವಾಭಿಮಾನದಿಂದ ಇರುತ್ತಾರೆ ಎಂದರು.

ಹೆಣ್ಣಿಗೆ 5 ರೂಪಾಯಿನಲ್ಲೂ ಜೀವನ ಸಾಗಿಸಲು ಬರುತ್ತದೆ. 50 ಲಕ್ಷ ರೂಪಾಯಿಯಲ್ಲೂ ಜೀವನ ಮಾಡಲು ಬರುತ್ತದೆ, ಹೆಣ್ಣು ಆರೋಗ್ಯ ಕಾಪಾಡಿಕೊಂಡು ಸಂಸಾರ ಮಾಡಿದರೆ ಆ ಮನೆ ನಂದಗೋಕುಲ ಆಗುವುದರಲ್ಲಿ ಅನುಮಾನ ಇಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

ಇಂದಿನ ಸಮಾಜದಲ್ಲಿ ಪುರುಷರ ವಿಚಾರಧಾರೆ ಕೂಡ ಬದಲಾಗಿದೆ, ಇಂದು ಪುರುಷರು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂದು ಪ್ರತಿಯೊಬ್ಬ ಯಶಸ್ಸಿ ಮಹಿಳೆಯ ಹಿಂದೆ ಪುರುಷರು ನಿಂತಿರುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಈ ಮೊದಲು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಪುರುಷರಷ್ಟೇ ಗೆಲ್ಲುತ್ತಿದ್ದರು, ಇಂದು ಮಹಿಳೆಯರು ಗೆದ್ದಿದ್ದಾರೆ. ಅಂಧರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಕರ್ನಾಟಕದ ಮೂವರು ಆಟಗಾರ್ತಿಯರಿಗೆ ತಲಾ 10 ಲಕ್ಷ್ಮ ರೂಪಾಯಿ ಬಹುಮಾನ ಮೊತ್ತವನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅವರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಲಾಗಿದೆ. ಮೊದಲು ಮಹಿಳೆಯರ ಕ್ರಿಕೆಟ್ ಪಂದ್ಯಗಳನ್ನು ಯಾರೂ ನೋಡುತ್ತಿರಲಿಲ್ಲ, ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು 55 ಕೋಟಿ ಜನ ಟೀವಿ ಮೂಲಕ ವೀಕ್ಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.

ಭಾರತದ ಸಂಸ್ಕೃತಿಯಲ್ಲಿ ಮಹಿಳೆಗೆ ತುಂಬಾ ಗೌರವ ಇದೆ, ಮಹಿಳೆಯರಲ್ಲಿ ಇರುವ ಸಹನೆ ಬೇರೆ ಯಾರಿಗೂ ಇರುವುದಿಲ್ಲ. ಮೊದಲು ನಾವು ಸರಿಯಾಗಿ ಇದ್ದರೆ, ನಾವು ಬೇರೆಯವರಿಗೆ ಬುದ್ದಿ ಹೇಳಬಹುದು, ಪ್ರತಿಯೊಂದು ಹೆಣ್ಣು ಏನಾದರೂ ಒಂದು ಗುಣವನ್ನು ಹೊಂದಿರುತ್ತಾಳೆ. ಯಾವುದೇ ಕೆಲಸವನ್ನು ಮಹಿಳೆಗೆ ಕೊಟ್ಟರೂ ಚಾಕಚಕ್ಯತೆಯಿಂದ ಕೆಲಸವನ್ನು ಮಾಡಿ ತೋರಿಸುತ್ತೇವೆ ಎಂದರು.

ನಾನು ಎರಡು ಬಾರಿ ಚುನಾವಣೆಯಲ್ಲಿ ಸೋತೆ, ಆದರೆ, ದೃತಿಗೆಡದೆ ಹಗಲಿರುಳು ಶ್ರಮಿಸಿದೆ. ಇವಳಿಗೆ ಟಿಕೆಟ್‌ ಕೊಡದಿದ್ದರೆ ಬೇರೆಯವರನ್ನು ಸೋಲಿಸುತ್ತಾಳೆ ಅನ್ನುವಷ್ಟರ ಮಟ್ಟಿಗೆ ಬೆಳೆದೆ. ಇವತ್ತು 34 ಜನರಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ. ರಾಜ್ಯದ ಮಹಿಳೆಯರ, ಮಕ್ಕಳ, ಹಿರಿಯರ, ವಿಕಲಚೇತನರ ಸೇವೆಯನ್ನು ಮಾಡುತ್ತಿರುವೆ. ಸಾಧನೆಯ ಹಾದಿಯಲ್ಲಿ ಟೀಕೆ ಟಿಪ್ಪಣಿ, ಅಡ್ಡದಾರಿಗಳು ಬರುತ್ತವೆ. ಒಂದು ಗುರಿಯನ್ನು ಹಿಡಿದು ಮುಂದೆ ಸಾಗಬೇಕು ಎಂದು ಹೇಳಿದರು.

* ಗೃಹಲಕ್ಷ್ಮೀ ಯೋಜನೆ ಬಗ್ಗೆ ಬಿಜೆಪಿಗರಿಂದ ಅಪಪ್ರಚಾರ

ಗೃಹಲಕ್ಷ್ಮೀ ಯೋಜನೆ ಬಗ್ಗೆ ಬಿಜೆಪಿಗರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕಳೆದ ವರ್ಷದ ಫೆಬ್ರವರಿ, ಮಾರ್ಚ್‌ ತಿಂಗಳ ಹಣ ಹಾಕಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಹಣಕಾಸು ಇಲಾಖೆ ಅನುಮತಿ ಕೊಟ್ಟಿಲ್ಲ, ಹೀಗಾಗಿ ಹಣ ಹಾಕಲು ಆಗಿಲ್ಲ. ನಾನು 5 ಸಾವಿರ ಕೋಟಿ ರೂ. ಹಗರಣ ಮಾಡಿದ್ದರೆ ಮೋದಿ ಸರ್ಕಾರದ ಇಡಿ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿತ್ತು. ಮಾತಿನ ಚಪಲಕ್ಕೆ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ. ನಾನು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಾಗುತ್ತಿದ್ದೇನೆ. ನಾನು ಸಚಿವೆಯಾದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

* ವಿವಿಧ ಪ್ರಶಸ್ತಿಗಳ ಪ್ರದಾನ*

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅತ್ಯುತ್ತಮ ಸ್ತೀಶಕ್ತಿ ಗುಂಪುಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ಸ್ತ್ರೀ ಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ-21 ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು‌.

ಈ ವೇಳೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಅಡಿವೇಶ ಇಟಗಿ, ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕರಾದ‌ ಮಹೇಶ್ ಬಾಬು, ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ್. ಬಿ.ಎಚ್, ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು.

000

* ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭರವಸೆ: ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವಧನ ಹೆಚ್ಚಳ, ಎಲ್‌ಕೆಜಿ, ಯುಕೆಜಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಸಚಿವರು ಪದಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.

ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬಗ್ಗೆ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ನಾನು ಎಲ್ಲರ ಹಿತರಕ್ಷಣೆಗೆ ಬದ್ಧಳಾಗಿದ್ದೇನೆ ಎಂದು ಸಚಿವರು ತಿಳಿಸಿದರು.

ಈ ವೇಳೆ‌ ಇಲಾಖೆಯ ‌ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಿರ್ದೇಶಕರಾದ ಮಹೇಶ್ ಬಾಬು, ಸಂಘದ ಅಧ್ಯಕ್ಷರಾದ ವರಲಕ್ಷ್ಮೀ, ಕಾರ್ಯಾಧ್ಯಕ್ಷರಾದ ಶಾಂತಾ ಎಚ್.ಘಂಟಿ, ಪ್ರಧಾನ ಕಾರ್ಯದರ್ಶಿ ಎಚ್. ಎಸ್.ಸುನಂದಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments

Leave a Comment

Prev Post 25.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News