ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ- ಕು.ಮಂಜುಳಾ 10 ದಿನಗಳ ಕಾಲ ಮಹಿಳಾ ಜಾಗೃತಿ- ಶೋಭಾ ಕರಂದ್ಲಾಜೆ
ಬೆಂಗಳೂರು: ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವಂತಾಗಲಿದೆ ಎಂದು ಆಶಿಸಿದರು. ಮಹಿಳಾ ಮೀಸಲಾತಿ ಜಾರಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರು.
ಮಹಿಳಾ ಮೀಸಲಾತಿ ಎಂಬುದು ಬಹಳ ವರ್ಷಗಳಿಂದ ಒಂದು ಕೂಗು, ಅಪೇಕ್ಷೆ, ಬೇಡಿಕೆಯಾಗಿತ್ತು. ಅದು ಈಡೇರುವ ವಿಚಾರದಲ್ಲಿ ಸಂಶಯವಿತ್ತು. ಸುಮಾರು 15 ವರ್ಷಗಳ ಹಿಂದೆ ಇದು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಕೆಲವು ರಾಜಕೀಯ ಪಕ್ಷದವರು ಮಸೂದೆಯ ಹಾಳೆಯನ್ನು ಹರಿದು ಹಾಕಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು ಎಂದು ನೆನಪಿಸಿಕೊಂಡರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿರೋಧಿ ಮಾನಸಿಕತೆ ಮತ್ತು ದಾಷ್ಟ್ರ್ಯ ಇವೆರಡನ್ನೂ ತೋರಿಸಲಾಗಿತ್ತು ಎಂದು ನುಡಿದರು. ಬಳಿಕ ಈ ಮಸೂದೆ ನೆನೆಗುದಿಗೆ ಬಿದ್ದಿತ್ತು. ಯುಪಿಎ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಇದನ್ನು ಮುಂದಕ್ಕೆ ತರಲಾಗಲಿಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು ಎಂದು ವಿಶ್ಲೇಷಿಸಿದರು. ಕರ್ನಾಟಕದ ಗ್ರಾಮ ಪಂಚಾಯಿತಿಗಳ ಅತ್ಯುತ್ತಮ ಸಾಧನೆ ಗಣನೆಗೆ ತೆಗೆದುಕೊಂಡರೆ ಮಹಿಳೆ ಅಧ್ಯಕ್ಷೆ ಆಗಿರುವ ಕಡೆ ಉತ್ಕøಷ್ಟ ಸಾಧನೆ ಇತ್ತು. ಅಂಥಲ್ಲೇ ಪ್ರಶಸ್ತಿ ಲಭಿಸಿತ್ತು ಎಂದು ಗಮನ ಸೆಳೆದರು.
ಪ್ರಶ್ನೆಗೆ ಉತ್ತರ ನೀಡಿದ ಅವರು, ಸಂಸತ್ ಟಿಕೆಟ್ ವಿಚಾರದಲ್ಲಿ ಈಗಾಗಲೇ ಜನಪ್ರತಿನಿಧಿ ಆಗಿರುವವರಿಗೆ ಎಲ್ಲ ಪಕ್ಷಗಳು ಆದ್ಯತೆ ಕೊಡಲಿವೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಈಗಿನಿಂದಲೇ ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಹಳದಿ ಗ್ಲಾಸ್ ಹಾಕಿಕೊಂಡ ಕಾಂಗ್ರೆಸ್
ಕಾಂಗ್ರೆಸ್ ಹಳದಿ ಗ್ಲಾಸ್ ಹಾಕಿಕೊಂಡಿದೆ. ಅದರಿಂದ ಯಾವುದನ್ನು ನೋಡಿದರೂ ಹಳದಿ, ಚುನಾವಣೆಯೇ ಅವರಿಗೆ ಗೋಚರಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಬೀರುವುದೆಂದು ನನಗೆ ಅನಿಸುತ್ತಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಈ ಮಸೂದೆಗೆ ವಿರೋಧ ಇದ್ದಾರಾ ಅಥವಾ ಈಗ ಚರ್ಚೆ ಮಾಡುವುದಕ್ಕೆ ವಿರೋಧ ಇದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮಸೂದೆಗೆ ವಿರೋಧ, ಮೊಸಳೆಕಣ್ಣೀರು..
ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದ ಪಕ್ಷದಲ್ಲಿ ಸೋನಿಯಾ ಗಾಂಧಿಯವರು ಯುಪಿಎ ಯನ್ನು ನಿಯಂತ್ರಿಸುತ್ತಿದ್ದಾಗ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಿತು; ಮೊಸಳೆಕಣ್ಣೀರು ಸುರಿಸಿದ್ದರು. ಕೆಲವು ಬಾರಿ ವಿರೋಧಿಸಿದ್ದರು. ಅವರಿಗೆ ಮಹಿಳೆ ಎಂದರೆ ಈಗ ಪ್ರಿಯಾಂಕ ಗಾಂಧಿ ಮಾತ್ರ. ಬೇರೆ ಮಹಿಳೆಯರು ಬರುವುದು ಅವರಿಗೆ ಅಗತ್ಯ ಇಲ್ಲ ಎಂದು ನುಡಿದರು. ಪ್ರಿಯಾಂಕ ಗಾಂಧಿ ಬೇಕು; ಬೇರೆ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಕಾಂಗ್ರೆಸ್ಸಿನ ಮಾನಸಿಕತೆ ಎಂದು ಆಕ್ಷೇಪಿಸಿದರು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹೊರತುಪಡಿಸಿ ಸಾಮಾನ್ಯ ಮಹಿಳೆಯರು ಸಂಸತ್ತಿಗೆ ಬರುವುದು ಅವರಿಗೆ ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಮಾನಸಿಕತೆಯನ್ನು ಅವರು ಬದಲಿಸಿಕೊಳ್ಳಲಿ ಎಂದು ಒತ್ತಾಯಿಸಿದರು.
ಸಹಿ ಸಂಗ್ರಹ, ಮಿಸ್ಡ್ ಕಾಲ್ ಅಭಿಯಾನ- ಕು. ಸಿ.ಮಂಜುಳಾ
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ.ಮಂಜುಳಾ ಅವರು ಮಾತನಾಡಿ, ನಾರಿ ಶಕ್ತಿ ವಂದನ್ ಎಂಬ ಕಾಯ್ದೆ ತರಲು ಪ್ರಧಾನಿಯವರು ಮುಂದಾಗಿದ್ದು, ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ ಆಯೋಜಿಸಲಾಗುವುದು ಎಂದು ಹೇಳಿದರು.
ಸಹಿ ಸಂಗ್ರಹವೂ ನಡೆಯಲಿದೆ. ನಾಳೆ ಕೆ.ಆರ್.ಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಆರಂಭವಾಗುತ್ತದೆ. ಇದು ರಾಜ್ಯದಾದ್ಯಂತ ನಡೆಯಲಿದೆ. ಮಸೂದೆ ಬೆಂಬಲಿಸಲು ಮಿಸ್ಡ್ ಕಾಲ್ ಅಭಿಯಾನ ಮಾಡುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ ಎಂದು ವಿವರಿಸಿದರು. ಯುವ ಮೋರ್ಚಾದಿಂದ ಬೈಕ್, ಸ್ಕೂಟಿ ರ್ಯಾಲಿಗಳನ್ನು ಆಯೋಜಿಸಲಿದ್ದೇವೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್, ಶ್ರೀಮತಿ ರೂಪಾಲಿ ನಾಯಕ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ, ರಾಜ್ಯ ವಕ್ತಾರರಾದ ಕು. ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.





Comments
Leave a Comment