ಎಂ.ಸಿ.ಸಿ.ಬ್ಯಾಂಕ್ ಗಮನಾರ್ಹ ಸಾಧನೆ. ೧೩ ಕೋಟಿ ರೂ.ಲಾಭ
From Jayaram Udupi
ಎಂ.ಸಿ.ಸಿ.ಬ್ಯಾಂಕ್ ಗಮನಾರ್ಹ ಸಾಧನೆ. ೧೩ ಕೋಟಿ ರೂ.ಲಾಭ.
ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್ 2025-26 ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ರೂ.13 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದೆ.
114ನೇ ವರ್ಷದ ಸೇವೆಯತ್ತ ಸಾಗುತ್ತಿರುವ ಬ್ಯಾಂಕ್, ಎಲ್ಲಾ ಆರ್ಥಿಕ ಮಾನದಂಡಗಳಲ್ಲಿ ಉತ್ತಮ ಬೆಳವಣಿಗೆ ತೋರಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೊ ಮಂಗಳೂರಿನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿನ ಒಟ್ಟು ವ್ಯವಹಾರ ರೂ.1525 ಕೋಟಿಗೆ ತಲುಪಿದ್ದು, 23% ವೃದ್ಧಿ ಕಂಡಿದೆ. ಠೇವಣಿಗಳು ರೂ.872.88 ಕೋಟಿಗೆ ಏರಿಕೆಯಾಗಿ 23.74% ಬೆಳವಣಿಗೆ ಕಂಡಿದ್ದು, ಸಾಲ ವಿತರಣೆ ರೂ.652.06 ಕೋಟಿಗೆ ತಲುಪಿದ್ದು 21.79% ಏರಿಕೆಯಾಗಿದೆ ಎಂದವರು ಅಂಕಿ ಅಂಶ ನೀಡಿದರು.
2018ರಲ್ಲಿ ರೂ.500 ಕೋಟಿ ಇದ್ದ ಒಟ್ಟು ವ್ಯವಹಾರವು ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಾಗಿ ದಾಖಲೆಯಾಗಿದೆ. ಬ್ಯಾಂಕಿನ ನಿವ್ವಳ ಮೌಲ್ಯ ರೂ.91.80 ಕೋಟಿಗೆ ಏರಿಕೆಯಾಗಿದೆ.
ಈಗಾಗಲೇ ಬೈಂದೂರು ಮತ್ತು ಸಂತೆಕಟ್ಟೆ ಶಾಖೆಗಳನ್ನು ಆರಂಭಿಸಿರುವ ಬ್ಯಾಂಕ್, ಜೂನ್ ಅಂತ್ಯದೊಳಗೆ ದೇರಳಕಟ್ಟೆಯಲ್ಲಿ 22ನೇ ಶಾಖೆ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿಯಲ್ಲಿ 23ನೇ ಶಾಖೆ ಆರಂಭ ಮಾಡಲಿದೆ. ಮಾರ್ಚ್ ಒಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಹಾಗು ಮಂಗಳೂರಿನಲ್ಲಿ 25ನೇ “ಸಿಲ್ವರ್ ಶಾಖೆ” ಆರಂಭಿಸಲು ಯೋಜನೆ ರೂಪಿಸಿದೆ. ಮುಂದಿನ ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 25ಕ್ಕೆ ಏರಲಿದೆ ಎಂದವರು ಬ್ಯಾಂಕಿನ ಭವಿಷ್ಯದ ಮುನ್ನೋಟ ಒದಗಿಸಿದರು.
ಬ್ಯಾಂಕ್ 7 ಹೊಸ ಎ.ಟಿ.ಎಂ.ಗಳನ್ನು ಸ್ಥಾಪಿಸಿದ್ದು, ಒಟ್ಟು ಸಂಖ್ಯೆ 15ಕ್ಕೆ ಏರಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ಮೊಬೈಲ್ ಬ್ಯಾಂಕಿಂಗ್ ಹಾಗೂ ಎ.ಟಿ.ಎಂ. ಸೇವೆಗಳು ಉಚಿತವಾಗಿ ಲಭ್ಯವಿವೆ. ಬ್ಯಾಂಕ್ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಉದ್ಯಮ ಸಾಲ ಸೇರಿದಂತೆ ವಿವಿಧ ಹಣಕಾಸು ಉತ್ಪನ್ನಗಳನ್ನು ಒದಗಿಸುತ್ತಿದೆ. ಕಡಿಮೆ ದರದಲ್ಲಿ ಲಾಕರ್ ಸೌಲಭ್ಯವೂ ಲಭ್ಯವಿದೆ ಎಂದವರು ತಿಳಿಸಿದರು.






Comments
Leave a Comment