ನವೆಂಬರ್ ನಲ್ಲಿ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ.
From Jayaram Udupi
ಮಂಗಳೂರು :
ನಲ್ವತ್ತರ ಸಂವತ್ಸರ ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶವನ್ನು ನವೆಂಬರ್ 3 ರಿಂದ 15 ರವರೆಗೆ ನಡೆಸಲು ತೀರ್ಮಾನಿಸಿದೆ . ಇದರ ಪೂರ್ವಭಾವಿಯಾಗಿ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಏಪ್ರಿಲ್ 10 ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 4.00 ಗಂಟೆಗೆ ನೆರವೇರಲಿದೆ ಎಂದು ಮಾಂಡ್ ಸೊಭಾಣ್ ಇದರ ಅಧ್ಯಕ್ಷರಾದ ಲುವಿ ಜೆ ಪಿಂಟೊ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಲಾಂಛನ ಬಿಡುಗಡೆಗೊಳಿಸುವರು. ಗೌರವ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಗೋವಾದ ಕಲಾವಿದ ಮೈಕಲ್ ಗ್ರೇಶಿಯಸ್ ಸಹಿತ ಮತ್ತಿರರು ಭಾಗವಹಿಸಲಿದ್ದಾರೆ ಎಂದರು .
ಈ ಸಂಗೀತ ಮಹಾ ಸಮಾವೇಶದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ, ಸಮೂಹ ಗಾಯನದ ಅತೀ ದೀರ್ಘ ಸಮಯದ ಗಿನ್ನೆಸ್ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗುವುದು. ಈ ಪ್ರಯತ್ನದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳಿಂದಲೂ ಹಾಗೂ ವಿದೇಶಗಳಿಂದಲೂ 6000 ಕ್ಕೂ ಮಿಕ್ಕಿ ಹಾಡುಗಾರರು ಭಾಗವಹಿಸಲಿದ್ದಾರೆ ಎಂದರು .
ಈ ದಾಖಲೆಯಲ್ಲಿ ಕ್ರೈಸ್ತ, ಜಿಎಸ್‌ಬಿ, ದಾಲ್ದಿ, ಕುಡ್ಮಿ, ಖಾರ್ವಿ, ಸಿದ್ದಿ, ಸಿರಿಯನ್ ಆರ್ಥೊಡಾಕ್ಸ್ ಮತ್ತಿತರ ಸಮುದಾಯಗಳ ಗಾಯಕರು ಸುಮಾರು 5000 ಕೊಂಕಣಿ ಹಾಡುಗಳನ್ನು ಹಾಡಲಿದ್ದಾರೆ. ಆ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ವಿವಿಧ ಸಂವಾದ ಗೋಷ್ಟಿಗಳನ್ನು ಆಯೋಜಿಸಲಾಗುವುದು. ಸಂಗೀತದಲ್ಲಿ ಮಹತ್ತರ ಸಾಧನೆಗೈದ ಹಿರಿಯರನ್ನು ಸಮ್ಮಾನಿಸಲಾಗುವುದು, . ಕೊಂಕಣಿ ಸಂಗೀತಕ್ಕೆ ಮಹೋನ್ನತ ಕೊಡುಗೆ ನೀಡಿದ ಎರಿಕ್ ಒಝೇರಿಯೊ ಅವರಿಗೆ ಅರ್ಪಣೆಯಾಗಿ ಈ ಕಾರ್ಯಕ್ರಮವನ್ನು ನಡೆಯಲಿದೆ ಎಂದರು .
ಪತ್ರಿಕಾ ಗೋಷ್ಟಿಯಲ್ಲಿ ಮಾಂಡ್ ಸೊಭಾಣ್ ಸಾಂಸ್ಕೃತಿಕ ಸಂಘಟನೆಯ ಸದಸ್ಯರಾದ ರೊಯ್ ಕ್ಯಾಸ್ತೆಲಿನೊ , ಜೊಯೆಲ್ ಪಿರೇರಾ , ಸ್ಟ್ಯಾನಿ ಆಲ್ವಾರಿಸ್ , ರೊನಾಲ್ಡ್ ಕ್ರಾಸ್ತಾ , ನವೀನ್ ಲೋಬೊ ಉಪಸ್ಥಿತರಿದ್ದರು .





Comments
Leave a Comment